ರೀಡ್, ಚಾಲ್ರ್ಸ್
1814-74: ಇಂಗ್ಲೆಂಡಿನ ಕಾದಂಬರಿಕಾರ. ಆಕ್ಸ್‍ಫ ರ್ಡಿನಲ್ಲಿ ವಿದ್ಯಾಭ್ಯಾಸ ಮಾಡಿ ವಕೀಲನಾದ. ಪ್ರಾರಂಭದಲ್ಲಿ ಮಾಸ್ಕ್‍ಸ್ ಅಂಡ್ ಫೇಸಸ್, ಗೋಲ್ಡ್, ಡ್ರಿಂಕ್ ಮೊದಲಾದ ನಾಟಕಗಳನ್ನು ಬರೆದ. ಇವುಗಳಿಗೆ ಅನಂತರ ಕಾದಂಬರಿಯ ರೂಪವನ್ನು ಕೊಟ್ಟ. ಮಾಸ್ಕ್‍ಸ್ ಅಂಡ್ ಫೇಸಸ್ ನಾಟಕವು ಪೆಗ್ ವಾಷಿಂಗ್‍ಟನ್ ಎಂಬ ಕಾದಂಬರಿಯಾಯಿತು (1852). ದಿ ಕ್ಲಾಯಿಸ್ಟರ್ ಅಂಡ್ ದಿ ಅರ್ತ್ (1861) ಇವನ ಶ್ರೇಷ್ಠ ಕಾದಂಬರಿ. ಇದಲ್ಲದೆ ಕ್ರಿಸ್ಟಿ ಜಾನ್‍ಸನ್ (1853), ಇಟ್ ಈಸ್ ನೆವರ್ ಟೂ ಲೇಟ್ ಟು ಮೆಂಡ್ (1856), ಹಾರ್ಡ್ ಕ್ಯಾಷ್ (1863), ಗ್ರಿಫಿತ್ ಗುಂಟ್(1867), ಫಾರ್ ಪೈ (1869), ಪುಟ್ ಯುವರ್‍ಸೆಲ್ಫ್ ಇನ್ ಹಿಸ್ ಪ್ಲೇಸ್ (1870) ಮತ್ತು ಎ ಟೆರಿಬ್ಲ್ ಟೆಂಪ್‍ಟೀಷನ್ (1871) ಎಂಬ ಕಾದಂಬರಿಗಳನ್ನು ಬರೆದ.
ಕ್ರಿಸ್ಟಿ ಜಾನ್‍ಸನ್ ಎಂಬ ಕಾದಂಬರಿ ಸ್ಕಾಟ್‍ಲೆಂಡಿನಲ್ಲಿ ಒಂದು ಬೆಸ್ತರ ಹಳ್ಳಿಯ ಬದುಕನ್ನು ಚಿತ್ರಿಸುತ್ತದೆ; ಆ ಬದುಕಿನ ಪ್ರಶಾಂತತೆಯನ್ನು ಮಾತಿನಲ್ಲಿ ಸೆರೆಹಿಡಿಯುತ್ತದೆ. ದಿ ಕ್ಲಾಯಿಸ್ಟರ್ ಅಂಡ್ ದಿ ಅರ್ತ್ ಕಾದಂಬರಿಯನ್ನು ಕೆಲವರು ವಿಮರ್ಶಕರು ಚಾರಿತ್ರಿಕ ಕಾದಂಬರಿ ಎಂದು ಪರಿಗಣಿಸುತ್ತಾರೆ; ಇದರ ಕ್ರಿಯೆ ಮಧ್ಯಯುಗದಲ್ಲಿ ನಡೆಯುತ್ತದೆ. ಐಫಾಕ್ ಎವನ್ಸ್ ನಂತಹ ವಿಮರ್ಶಕರು ಮಧ್ಯಯುಗದ ಚಿತ್ರಣ ವಿವರ ಸಮೃದ್ಧವಾಗಿದ್ದರೂ ಚರಿತ್ರೆಗೆ ನಿಷ್ಠವಲ್ಲ ಎಂದು ಅಭಿಪ್ರಾಯಪಟ್ಟಿ ದ್ದಾರೆ. ಈ ಕಾದಂಬರಿಯ ವಸ್ತು, ಧಾರ್ಮಿಕ ಸಂಸ್ಥೆಯ (ಕ್ಲಾಯಿಸ್ಟರ್) ದಬ್ಬಾಳಿಕೆ ಮತ್ತು ಗೃಹಜೀವನದ (ಅರ್ತ್) ನಡುವಣ ಸಂಘರ್ಷ. ವಿನ್ಯಾಸದ ವೈಶಾಲ್ಯ, ವೈವಿಧ್ಯ, ಸೃಷ್ಟಿಪ್ರತಿಭೆ, ನಿರೂಪಣಾ ಕೌಶಲ-ಈ ಎಲ್ಲ ರೀತಿಗಳಲ್ಲಿ ಇದೊಂದು ಉತ್ತಮ ಕಾದಂಬರಿ. ಈ ಕಾದಂಬರಿ ಯಲ್ಲೂ ಗ್ರಿಫಿತ್ ಗುಂಟ್‍ನಲ್ಲಿಯೂ ಮತಾಧಿಕಾರಿಗಳ ಬ್ರಹ್ಮಚರ್ಯದ ದುರುಪಯೋಗವನ್ನು ಕಾದಂಬರಿಕಾರ ಖಂಡಿಸುತ್ತಾನೆ. ಇಟ್ ಈಸ್ ನೆವರ್ ಟೂ ಲೇಟ್ ಟು ಮೆಂಡ್‍ನಲ್ಲಿ ತಾನೇ ಕಂಡಿದ್ದ ಭಯಾನಕ ಸೆರೆಮನೆಯ ಬದುಕನ್ನು ಚಿತ್ರಿಸಿದ್ದಾನೆ. ಹಾರ್ಡ್ ಕ್ಯಾಷ್‍ನಲ್ಲಿ ಅನಾಥಾಶ್ರಮಗಳಲ್ಲಿನ ಭಯಾನಕ ಬದುಕನ್ನು ವರ್ಣಿಸಿದ್ದಾನೆ.

ತನ್ನ ಸಮಕಾಲೀನನಾದ ಚಾಲ್ರ್ಸ್ ಡಿಕನ್ಸ್‍ನಂತೆ ರೀಡ್ ಕೂಡ ಸಾಮಾಜಿಕ ಸಮಸ್ಯೆಗಳಲ್ಲಿ ತೀವ್ರ ಆಸಕ್ತಿ ಇರುವ ಕಾದಂಬರಿಕಾರ. ಇವನಿಗೆ ಕಥೆ ಮುಖ್ಯವಲ್ಲ. ಒಂದು ಅನ್ಯಾಯವನ್ನು ಅಥವಾ ಶೋಷಣೆ ಯನ್ನು ಚಿತ್ರಿಸಿ ಸಮಾಜದ ನ್ಯಾಯಪ್ರಜ್ಞೆಯನ್ನು ಎಚ್ಚರಿಸುವುದು ಇವನ ಬರೆವಣಿಗೆಯ ಮುಖ್ಯ ಆಶಯ. ಇವನದು ವಾಸ್ತವತಾ ಮಾರ್ಗ. ಕೆಲವೊಮ್ಮೆ ಎಮಿಲಿ eóÉೂೀಲಾನನ್ನು ನೆನಪಿಗೆ ತರುತ್ತಾನೆ.			
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ